Telegram Join My Telegram WhatsApp Join My WhatsApp

ಬ್ಯಾಡ್ಮಿಂಟನ್ ತಾರೆ ಸೈನಾ ವಿದಾಯ.

ಒಲಿಂಪಿಕ್ ಕಂಚಿನ ಪದಕ ವಿಜೇತೆ, ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕದ ಒಡತಿ ಮಾಜಿ ವಿಶ್ವ ನಂ-1 ಆಟಗಾರ್ತಿ “ಸೈನಾ ನೆಹ್ವಾಲ್ ಬ್ಯಾಡ್ಮಿಂಟನ್ ಗೆ ನಿವೃತ್ತಿ” ಘೋಷಿಸಿದ್ದಾರೆ. 

ತಮ್ಮ ಮೂವತ್ತೈದನೇ ವಯಸ್ಸಿನಲ್ಲಿ ಇನ್ನು ತನ್ನಿಂದ ಆಗಲ್ಲ, ತಾನು ಆಡಲ್ಲ ಎಂದು ಹೇಳಿದ್ದಾರೆ. ಕಾಲದಲ್ಲಿ ತಮ್ಮ ಅದ್ಭುತ ಆಟದ ಮೂಲಕ ಸರಳ ಸಹಜ ನಡವಳಿಕೆಗಳ ಮೂಲಕ ಭಾರತದಲ್ಲಿ ಬ್ಯಾಡ್ಮಿಂಟನ್ ಜನಪ್ರಿಯವಾಗಲು ಕಾರಣವಾಗಿದ್ದರು. ಸದ್ಯ ತಮ್ಮ ಮೂಳೆಗಳು ಸವೆದಿವೆ. ಸಂಧಿವಾತವು ಶುರುವಾಗಿದೆ ಎಂದು ಅವರೇ ಹೇಳಿಕೊಂಡಿದ್ದಾರೆ. 

ದೀರ್ಘಕಾಲದ ಮೊಣಕಾಲಿನ ಸಮಸ್ಯೆಯಿಂದಾಗಿ ಸೈನಾ ನೆಹ್ವಾಲ್ ಕಳೆದ ಎರಡು ವರ್ಷಗಳಿಂದ ಆಟದಿಂದ ಹೊರಗುಳಿದಿದ್ದಾರೆ. ಕೊನೆಯ ಬಾರಿಗೆ 2023 ರಲ್ಲಿ ಸಿಂಗಾಪುರ ಓಪನ್ ನಲ್ಲಿ ಉನ್ನತ ಮಟ್ಟದಲ್ಲಿ ಆಡಿದ್ದರು, 2012 ರ ಲಂಡನ್ ಒಲಂಪಿಕ್ ಕಂಚಿನ ಪದಕ ವಿಜೇತೆ ಪಾಡ್ ಕಾಸ್ಟ್ ನಲ್ಲಿ ಮಾತನಾಡುತ್ತಾ ಈ ಘೋಷಣೆ ಮಾಡಿದ್ದಾರೆ. 

ನಾನು ಎರಡು ವರ್ಷಗಳ ಹಿಂದೆ ಆಟವಾಡುವುದನ್ನು ನಿಲ್ಲಿಸಿದ್ದೆ. ನಾನು ನನ್ನ ಸ್ವಂತ ಇಚ್ಛೆಯಂತೆ ನಿರ್ಗಮಿಸುತ್ತೇನೆ, ಆದ್ದರಿಂದ ಅದನ್ನು ಘೋಷಿಸುವ ಅಗತ್ಯವಿಲ್ಲ ಎಂದು ಸೈನಾ ಪಾಡ್ ಕಾಸ್ಟ್ ನಲ್ಲಿ ಹೇಳಿದರು.

ಮಾಜಿ ವಿಶ್ವ ನಂ-1 ಆಟಗಾರ್ತಿ ತನ್ನ ಮೊಣಕಾಲಿನ ಸಮಸ್ಯೆಯಿಂದಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆ. ನನಗೆ ಸಂಧಿವಾತವಿದೆ. ನನ್ನ ಹೆತ್ತವರಿಗೆ ಅದು ತಿಳಿಯಬೇಕಾಗಿತ್ತು. ತನ್ನ ತರಬೇತುದಾರರು ಅದನ್ನು ತಿಳಿದುಕೊಳ್ಳಬೇಕಾಗಿತ್ತು. ನಾನು ಅವರಿಗೆ ಬಹುಶಃ ನಾನು ಇನ್ನು ಮುಂದೆ ಆಟವಾಡಲು ಸಾಧ್ಯವಿಲ್ಲ ಎಂದು ಹೇಳಿದ್ದೇನೆ ಎಂದರು. ಔಪಚಾರಿಕವಾಗಿ ನಾನು ನಿವೃತ್ತಿ ಘೋಷಿಸಿಲ್ಲ. ಅದರೆ  ಜನರು ನಾನು ಆಡದಿರುವುದನ್ನು ನೋಡಿ.ಅರ್ಥಮಾಡಿಕೊಳ್ಳುತ್ತಾರೆ ಎಂದಿದ್ದಾರೆ.

ನನ್ನ ನಿವೃತ್ತಿಯನ್ನು ಘೋಷಿಸುವುದು ಅಷ್ಟು ದೊಡ್ಡ ವಿಷಯ ಎಂದು ನಾನು ಭಾವಿಸಿರಲಿಲ್ಲ. ನನ್ನ ಮೊಣಕಾಲು ಇತ್ತೀಚಿಗೆ ಸಪೋರ್ಟ್ ಮಾಡುತ್ತಿಲ್ಲ. ಹೀಗಾಗಿ ಸಮಯ ಮುಗಿದಿದೆ ಎಂದು ನಾನು ಭಾವಿಸಿದೆ ಎಂದರು. ವಿಶ್ವದ ಅತ್ಯುತ್ತಮ ಆಟಗಾರ್ತಿಯಾಗಲು ಎಂಟರಿಂದ ಒಂಬತ್ತು ಗಂಟೆಗಳ ಕಾಲ ತರಬೇತಿ ಪಡೆಯುತ್ತಿದ್ದೆ. ಈಗ ನನ್ನ ಮೊಣಕಾಲು ಒಂದು ಅಥವಾ 2 ಗಂಟೆ ಆಡಲು ಬಿಡುತ್ತಿಲ್ಲ ಎಂದರು. 

2016ರ ರಿಯೋ ಒಲಿಂಪಿಕ್ಸ್ ನಲ್ಲಿ ಸೈನಾ ನೆಹ್ವಾಲ್  ವೃತ್ತಿಜೀವನಕ್ಕೆ ಅಪಾಯಕಾರಿಯಾದ ಮೊಣಕಾಲಿನ ಗಾಯಕ್ಕೆ ಒಳಗಾದರು. ಅದಾಗ್ಯೂ ಅವರು 2017ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. 2018ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದರು.ಅವರ ಮೊಣಕಾಲು ಸಮಸ್ಯೆ ಸಾಧನೆಗೆ ಅಡ್ಡಿಯಾಗುತ್ತಲೇ ಇತ್ತು. 

2020 ರಲ್ಲಿ ತಮ್ಮ ಮೊಣಕಾಲುಗಳಲ್ಲಿ ಸಂಧಿವಾತ ಇದೆ ಎಂದು ಗೊತ್ತಾಯಿತು. ನಂತರ ಕಾರ್ಟಿಲೇಜ್ ಸವೆದು ಹೋಗಿದೆ ಎಂದು ಪರೀಕ್ಷೆ ಮಾಡಿದ ವೈದ್ಯರು ಹೇಳಿದ್ದರು. ಇದರಿಂದಾಗಿ ಉನ್ನತ ಮಟ್ಟದ ಸ್ಪರ್ಧೆಗೆ ಅಗತ್ಯವಾದ ತೀವ್ರ ತರಬೇತಿ ಪಡೆಯುವುದು ಅವರಿಗೆ ಕಷ್ಟವಾಗುತ್ತಿತ್ತು. 

ಪದ್ಮವಿಭೂಷಣ, ಖೇಲ್ ರತ್ನ ಪುರಸ್ಕೃತೆ :

ಬ್ಯಾಡ್ಮಿಂಟನ್ ನಲ್ಲಿ ಸೈನಾ ಅತ್ಯುತ್ತಮ ಸಾಧನೆಗಳ ಕಾರಣಕ್ಕೆ ಅವರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ, ಪದ್ಮಶ್ರೀ ನೀಡಿ ಗೌರವಿಸಿದೆ. ಹಾಗೆ ದೇಶದ ಪರಮೋಚ್ಛ ಕ್ರೀಡಾ ಪ್ರಶಸ್ತಿ ಧ್ಯಾನ್ ಖೇಲ್ ರತ್ನ ಸಿಕ್ಕಿದೆ. ಅರ್ಜುನ ಪ್ರಶಸ್ತಿಯೂ ಅವರಿಗೆ ಒಲಿದಿದೆ. 

ವಿಶ್ವ ಕ್ರೀಡಾ ಪ್ರಶಸ್ತಿಗಳು :

  • 2012 ಲಂಡನ್ ಒಲಂಪಿಕ್ಸ್‌ನಲ್ಲಿ ಕಂಚು.
  • 2005 ಜಕಾರ್ತ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ.
  • 2017 ಗ್ಲಾಸ್ಗೋ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಕಂಚು.
  • ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಮೂರು ಚಿನ್ನದ ಪದಕಗಳು.
  • ಚಾಂಪಿಯನ್‌ಷಿಪ್‌ನಲ್ಲಿ ಒಂದು ಚಿನ್ನ, ಒಂದು ಬೆಳ್ಳಿ. 

ಸೈನಾ ನೆಹ್ವಾಲ್ ಅವರು ಭಾರತದ ಅತ್ಯಂತ ಪ್ರಸಿದ್ಧ ಬ್ಯಾಡ್ಮಿಂಟನ್ ಆಟಗಾರ್ತಿಯರಲ್ಲಿ ಒಬ್ಬರು.

  • ಪೂರ್ಣ ಹೆಸರು: ಸೈನಾ ನೆಹ್ವಾಲ್
  • ಜನನ: 17 ಮಾರ್ಚ್ 1990
  • ಜನನ ಸ್ಥಳ: ಹಿಸಾರ್, ಹರಿಯಾಣ, ಭಾರತ
  • ಕ್ರೀಡೆ: ಬ್ಯಾಡ್ಮಿಂಟನ್
  • ತಂದೆ–ತಾಯಿ: ಹರಿವೀರ್ ಸಿಂಗ್ ನೆಹ್ವಾಲ್, ಉಷಾ ನೆಹ್ವಾಲ್

ಪ್ರಮುಖ ಸಾಧನೆಗಳು :

  • 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ

  • 2015ರಲ್ಲಿ ವಿಶ್ವ ನಂಬರ್ 1 ಸ್ಥಾನ ಪಡೆದ ಮೊದಲ ಭಾರತೀಯ ಮಹಿಳೆ

  • ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕಗಳು

  • ಅನೇಕ ಸೂಪರ್ ಸಿರೀಸ್ ಮತ್ತು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ವಿಜಯ

ಪ್ರಶಸ್ತಿಗಳು :

  • ಅರ್ಜುನ ಪ್ರಶಸ್ತಿ (2009)

  • ಪದ್ಮಶ್ರೀ (2010)

  • ರಾಜೀವ್ ಗಾಂಧಿ ಖೇಲ್ ರತ್ನ (2009–10)

  • ಪದ್ಮ ಭೂಷಣ (2016)

ವಿಶೇಷತೆ :

  • ಸೈನಾ ನೆಹ್ವಾಲ್ ಅವರು ಭಾರತದ ಮಹಿಳಾ ಬ್ಯಾಡ್ಮಿಂಟನ್‌ಗೆ ಹೊಸ ದಿಕ್ಕು ನೀಡಿದವರು

  • ಅನೇಕ ಯುವ ಆಟಗಾರ್ತಿಗಳಿಗೆ ಪ್ರೇರಣೆಯಾಗಿದ್ದಾರೆ

  • ಶಿಸ್ತಿನ ತರಬೇತಿ, ಹಠ ಮತ್ತು ಆತ್ಮವಿಶ್ವಾಸದಿಂದ ಅವರು ಯಶಸ್ಸು ಗಳಿಸಿದ್ದಾರೆ

ಸೈನಾ ನೆಹ್ವಾಲ್ ಅವರು ಇಂದು ಭಾರತೀಯ ಕ್ರೀಡಾ ಲೋಕದ ಪ್ರೇರಣಾದಾಯಕ ನಾಯಕಿ ಎಂದು ಗುರುತಿಸಲ್ಪಟ್ಟಿದ್ದಾರೆ.